Tuesday, 12 January 2021

ಅಧ್ಯಾಯ - 4 ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ :

  ಅಧ್ಯಾಯ - 4
 ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ
ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ :


· ಸಾರ್ವಜನಿಕ ಹಣಕಾಸಿನ ಅರ್ಥ ಮತ್ತು ಮಹತ್ವ.

· ಆಯ-ವ್ಯಯ

· ಸಾರ್ವಜನಿಕ ವೆಚ್ಚ ಮತ್ತು ಸಾರ್ವಜನಿಕ ಆದಾಯ

  ಕೊರತೆಯ ಹಣಕಾಸು ಮತ್ತು ವಿತ್ತೀಯ ಕೊರತೆ.




1. ಪರಿಚಯ

ನಿಮಗೆ ನಿಮ್ಮ ಕುಟುಂಬವು ಯಾವ ಮೂಲಗಳಿಂದ ಎಷ್ಟು ವರಮಾನ ಪಡೆಯುತ್ತದೆ ಎಂಬ ಮಾಹಿತಿ ಇದೆಯೇ? ಪ್ರತಿ ಕುಟುಂಬದ ಸದಸ್ಯರು ಕೃಷಿ, ಉದ್ದಿಮೆ ಅಥವಾ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವರಮಾನ ಪಡೆಯುತ್ತಾರೆ. ವ್ಯಕ್ತಿಗಳು ವರಮಾನವನ್ನು ಗೇಣಿ ಅಥವಾ ಬಾಡಿಗೆ (ಭೂಮಿ, ಜಮೀನು ಮತ್ತು ಇತರ ಸ್ಥಿರ ಆಸ್ತಿಗಳ ಮೇಲೆ); ಕೂಲಿ (ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮ್ಮ ಶ್ರಮ ನೀಡುವುದರ ಮೂಲಕ); ಬಡ್ಡಿ (ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡುವುದರ ಮೂಲಕ ಅಥವಾ ಇನ್ನೊಬ್ಬರಿಗೆ ಸಾಲವಾಗಿ ನೀಡುವುದರ ಮೂಲಕ); ಮತ್ತು ಲಾಭಗಳ (ಒಂದು ಉತ್ಪಾದಕ ಚಟುವಟಿಕೆಯಲ್ಲಿ ಹಣ ತೊಡಗಿಸುವುದರ ಮೂಲಕ) ರೂಪದಲ್ಲಿ ವರಮಾನ ಪಡೆಯುತ್ತಾರೆ.

ಹೀಗೆ ಪಡೆಯಲಾಗುವ ವರಮಾನವನ್ನು ಅನುಭೋಗ ಮತ್ತು ಅಭಿವೃದ್ಧಿ ಉದ್ದೇಶಗಳಿಗಾಗಿ ವೆಚ್ಚ ಮಾಡಲಾಗುತ್ತದೆ. ವ್ಯಕ್ತಿ ಅಥವಾ ಕುಟುಂಬ ತನ್ನ ವರಮಾನ ಮತ್ತು ವೆಚ್ಚವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಅಭಿವೃದ್ಧಿಯನ್ನು ಸಾಧಿಸುವುದು ಒಂದು ಕಲೆ. ವರಮಾನಕ್ಕಿಂತ ವೆಚ್ಚ ಅಧಿಕವಾದಾಗ ಸಾಲ ಮಾಡಬೇಕಾಗುತ್ತದೆ. ಹೀಗೆ ವ್ಯಕ್ತಿ ಅಥವಾ ಕುಟುಂಬದ ವರಮಾನ, ವೆಚ್ಚ ಮತ್ತು ಸಾಲದ ನಿರ್ವಹಣೆಯ ಬಗ್ಗೆ ತಿಳಿಸಿಕೊಡುವುದನ್ನು ‘ವೈಯಕ್ತಿಕ ಹಣಕಾಸು’ ಎನ್ನುತ್ತೇವೆ. ಅದೇ ರೀತಿಯಲ್ಲಿ ಸರ್ಕಾರವು ತನ್ನದೇ ಹಣಕಾಸನ್ನು ನಿರ್ವಹಿಸುತ್ತದೆ. ಅದೇ ಸಾರ್ವಜನಿಕ ಹಣಕಾಸು. ಈ ಅಧ್ಯಾಯದಲ್ಲಿ ಸರ್ಕಾರವು ತನ್ನ ಹಣಕಾಸನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣ.

ಸಾರ್ವಜನಿಕ ಹಣಕಾಸಿನ ಅರ್ಥ ಮತ್ತು ಮಹತ್ವ

ಸರ್ಕಾರದ ವರಮಾನ, ವೆಚ್ಚ ಹಾಗೂ ಸಾಲಗಳ ನಿರ್ವಹಣೆಯನ್ನು ಕುರಿತು ಅಧ್ಯಯನ ಮಾಡುವುದೇ ಸಾರ್ವಜನಿಕ ಹಣಕಾಸು. ಸರ್ಕಾರದ ವರಮಾನ ಹಾಗೂ ವೆಚ್ಚಗಳ ನಿರ್ವಹಣೆ ಮತ್ತು ಅವುಗಳಲ್ಲಿನ ಹೊಂದಾಣಿಕೆ ಮಾಡುವ ಪ್ರಕ್ರಿಯೆ ಬಗ್ಗೆ ಅಭ್ಯಸಿಸುವುದೇ ಸಾರ್ವಜನಿಕ ಹಣಕಾಸು ಎಂದು ಡಾಲ್ಟನ್‍ರವರು ವ್ಯಾಖ್ಯಾನಿಸುತ್ತಾರೆ. ಸಾರ್ವಜನಿಕ ಹಣಕಾಸು ಸರ್ಕಾರದ ವರಮಾನ, ವೆಚ್ಚ ಮತ್ತು ಸಾಲ ನಿರ್ವಹಣೆಯ ಸಮಗ್ರ ಚಿತ್ರಣವನ್ನು ನೀಡುತ್ತದೆ.

ಮಹತ್ವ: ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರವು ತನ್ನ ವರಮಾನ, ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಅನುಸರಿಸುವ ನೀತಿಗೆ ಕೋಶೀಯ ನೀತಿ ಅಥವಾ ವಿತ್ತೀಯ ನೀತಿ ಎನ್ನುತ್ತಾರೆ. ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆ ಸಾಧಿಸಿ ವರಮಾನದ ಸಮಾನ ಹಂಚಿಕೆಯನ್ನು ಸಾಧಿಸುವುದು ವಿತ್ತೀಯ ನೀತಿಯ ಪ್ರಮುಖ ಉದ್ದೇಶಗಳಾಗಿವೆ. 

ಸರ್ಕಾರವು ಸಾಮಾನ್ಯವಾಗಿ ತಾನು ಸಂಗ್ರಹಿಸಿದ ವರಮಾನವನ್ನು ಅಥವಾ ಪಡೆದ ಸಾಲದ ಮೊತ್ತವನ್ನು ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯಯಿಸುತ್ತದೆ. ಇದು ಬೆಳವಣಿಗೆ ದರವನ್ನು ವೃದ್ಧಿಸಿ ಎಲ್ಲರಿಗೂ ಪ್ರಯೋಜನ ದೊರಕಿಸುತ್ತದೆ. ಅದೇ ರೀತಿ ಆರ್ಥಿಕ ಹಿಂಜರಿತದ ಸಂದರ್ಭಗಳಲ್ಲಿ ವೆಚ್ಚವನ್ನು ಹಿಗ್ಗಿಸಿ, ಆರ್ಥಿಕ ಹಿಗ್ಗುವಿಕೆಯ ಸಂದರ್ಭಗಳಲ್ಲಿ ವೆಚ್ಚವನ್ನು ಕುಗ್ಗಿಸಿ, ಸರ್ಕಾರವು ಆರ್ಥಿಕ ಸ್ಥಿರತೆಯನ್ನು ಸಾಧಿಸುತ್ತದೆ. ಸರ್ಕಾರದ ವರಮಾನ, ವೆಚ್ಚ ಮತ್ತು ಅವುಗಳ ನಡುವಿನ ಹೊಂದಾಣಿಕೆಗಳು ವಾರ್ಷಿಕ ಆಯ-ವ್ಯಯ ಅಥವಾ ಮುಂಗಡ ಪತ್ರಗಳ ಭಾಗವಾಗಿರುವುದರಿಂದ, ಸಾರ್ವಜನಿಕ ಹಣಕಾಸಿನ ಅಧ್ಯಯನವು ಆಯ-ವ್ಯಯಗಳ ವಿಶ್ಲೇಷಣೆಗೂ ಸಹಾಯಕಾರಿಯಗುತ್ತದೆ.


2. ಆಯ-ವ್ಯಯ ಅಥವಾ ಮುಂಗಡ ಪತ್ರ

ಸರ್ಕಾರವು ಪ್ರತಿ ವರ್ಷ ತನ್ನ ಆಯ-ವ್ಯಯವನ್ನು ತಯಾರಿಸುತ್ತದೆ. ಭಾರತದಲ್ಲಿ ಹಣಕಾಸು ವರ್ಷವು ಏಪ್ರಿಲ್ 1ರಂದು ಪ್ರಾರಂಭವಾಗಿ ಅದರ ಮುಂದಿನ ವರ್ಷದ ಮಾರ್ಚ್ 31ಕ್ಕೆ ಮುಕ್ತಾಯವಾಗುತ್ತದೆ. ಮುಂದಿನ ವರ್ಷದ ಆಯ-ವ್ಯಯವನ್ನು ಸರ್ಕಾರವು ಸದರಿ ವರ್ಷದಲ್ಲಿ ತಯಾರಿಸಿ ಸಂಸತ್ತಿನ ಅನುಮೋದನೆ ಪಡೆಯುತ್ತದೆ. ಆ ಆಯ-ವ್ಯಯದ ಮೂಲಕ ತನ್ನ ಕೋಶೀಯ ನೀತಿಯ ಉದ್ದೇಶಗಳನ್ನು ಸಾಧಿಸಲು ಪ್ರಯತ್ನಿಸುತ್ತದೆ. ಹಾಗಾದರೆ ಆಯ-ವ್ಯಯ ಎಂದರೇನು? ಸರ್ಕಾರದ ಒಂದು ವರ್ಷದ ವರಮಾನ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಆಯ-ವ್ಯಯ ಪತ್ರ ಅಥವಾ ಮುಂಗಡ ಪತ್ರ ಎಂದು ಕರೆಯುತ್ತಾರೆ. ಇದು ಸರ್ಕಾರದ ವರಮಾನ ಮತ್ತು ವೆಚ್ಚವನ್ನು ತಿಳಿಸುವ ಒಂದು ದಾಖಲೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಪ್ರತ್ಯೇಕ ಆಯ-ವ್ಯಯವನ್ನು ತಯಾರಿಸುತ್ತವೆ. ಭಾರತದಲ್ಲಿ ಸಾಮಾನ್ಯವಾಗಿ ಹಣಕಾಸು ಸಚಿವರು ಪ್ರತಿವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಕೇಂದ್ರ ಆಯ-ವ್ಯಯವನ್ನು ಮಂಡಿಸುತ್ತಾರೆ.


ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಆಯ-ವ್ಯಯ ಪತ್ರದ ಮೇಲೆ ಸುದೀರ್ಘ ಚರ್ಚೆ ನಡೆದು, ಮಾರ್ಚ್ 31ರ ಒಳಗಾಗಿ ಎರಡೂ ಸದನಗಳ ಅನುಮೋದನೆಯನ್ನು ಪಡೆಯಲಾಗುತ್ತದೆ. ಆಯ-ವ್ಯಯ ಪತ್ರದಲ್ಲಿ ಮೂರು ವಿಧಗಳಿವೆ: ಸರ್ಕಾರದ ವರಮಾನವು ಅದರ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ, ಅದನ್ನು ಉಳಿತಾಯ ಆಯ-ವ್ಯಯ ಎಂತಲೂ; ವರಮಾನಕ್ಕಿಂತ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಕೊರತೆಯ ಆಯ-ವ್ಯಯ ಎಂತಲೂ; ವರಮಾನ ಮತ್ತು ವೆಚ್ಚಗಳೆರಡೂ ಸಮನಾಗಿದ್ದರೆ, ಅದನ್ನು ಸಮತೋಲನ ಆಯವ್ಯಯ ಎಂತಲೂ ಕರೆಯುತ್ತೇವೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ಸರ್ಕಾರಗಳು ಕೊರತೆಯ ಆಯ-ವ್ಯಯವನ್ನು ಮಂಡಿಸುವ ಮೂಲಕ ಅಧಿಕ ಪ್ರಮಾಣದ ವೆಚ್ಚ ಮಾಡಿ, ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿವೆ.